Sunday, October 2, 2016

ಕಾವೇರಿ ಸಮಸ್ಯೆ, ಒಕ್ಕೂಟ ವ್ಯವಸ್ಥೆ ಹಾಗೂ ಪ್ರಾದೇಶಿಕ ಪಕ್ಷಗಳು

ಕರ್ನಾಟಕದ ರಾಜ್ಯಗೀತೆ ಹೇಳುವಂತೆ,
   ಜಯ ಭಾರತ ಜನನಿಯ ತನುಜಾತೆ
   ಜಯಹೇ ಜಯ ಕರ್ನಾಟಕ ಮಾತೆ

ನಮ್ಮ ಮಾತೆ ಕರ್ನಾಟಕ; ಈ ಕರ್ನಾಟಕ ಮಾತೆ ಭಾರತ ಮಾತೆಯ ಮಗಳು.
ಕುವೆಂಪುರವರು ಬರೆದ ಈ ಸುಂದರ ಸಾಲುಗಳಲ್ಲಿ ಸಾಕಷ್ಟು ಅರ್ಥ ಅಡಗಿದೆ, ಈಗಿನ ಪರಿಸ್ಥಿತಿಗೆ.

ಕರ್ನಾಟಕವು ಭಾರತ ಒಕ್ಕೂಟದ ಒಂದು ಅವಿಭಾಜ್ಯ ಅಂಗ, ಭಾರತ ಮಾತೆಯ ಮಗಳಾಗಿ. ಇದೂ ಬರೀ ಸಂವಿಧಾನದ ಅಥವಾ ಬುದ್ಧಿವಾದಿಗಳ ವ್ಯಾಖ್ಯೆ ಅಲ್ಲ. ಇದರ ಜೊತೆಗೆ, ನಮ್ಮ ತಾಯಿ ಕರ್ನಾಟಕ ಮಾತೆ. ಈ ಅರ್ಥದಲ್ಲಿ, ಭಾರತಿ ನಮ್ಮ ಅಜ್ಜಿ. ನಮ್ಮ ತಾಯಿಯ ಕರುಳುಬಳ್ಳಿಯಿಂದ ನಾವು ಭಾರತಮಾತೆಗೆ ಸಂಬಂಧಿಕರು. ಇದರ ಇನ್ನೊಂದು ಅರ್ಥ, ನಮ್ಮ ನಾಡು ಮೊದಲು, ದೇಶ ನಂತರ !  ತುಂಬಾ ಕ್ರಾಂತಿಕಾರಿ ಎನಿಸುತ್ತದೆಯೇ ??

ಈಗ ಕಾವೇರಿ ಸಮಸ್ಯೆಯತ್ತ ದೃಷ್ಟಿ ಹರಿಸೋಣ.

ಒಂದು ದೃಷ್ಟಿಕೋನದಲ್ಲಿ, ಕಾವೇರಿ ನದಿ ಸಮಸ್ಯೆ ಕರ್ನಾಟಕ ಹಾಗೂ ತಮಿಳ್ ನಾಡುಗಳ  ಮಧ್ಯೆ ಇರುವ ನೀರಿನ ಜಗಳಾಟ ಎಂದು ವಿಂಗಡಿಸಬಹುದು. ಆದರೆ ಈ ಸಮಸ್ಯೆ ಈ ವರ್ಷ ಹಲವು ಹೊಸ ವಿಚಾರಗಳಿಗೆ ಆಸ್ಪದ ಕೊಟ್ಟಿದೆ. ಅತೀ ಮುಖ್ಯವಾಗಿ -- ದೇಶದ ಒಕ್ಕೂಟ ವ್ಯವಸ್ಥೆಯ  ವಸ್ತುಸ್ಥಿತಿ, ರಾಜ್ಯ ಮತ್ತು ಸರ್ವೋಚ್ಚ ನ್ಯಾಯಾಲ ನಡುವಿನ ಸಂಬಂಧ ಹಾಗೂ ರಾಜ್ಯ ವಿಧಾನ ಸಭೆ ಮತ್ತು ನ್ಯಾಯಾಂಗ ಇವುಗಳ  ಹಿರಿಮೆ.

ಈ ಮೂರೂ ವಿಷಯಗಳಲ್ಲಿ ಹತಾಶೆಗೊಂಡದ್ದು ರಾಜ್ಯ ಸರ್ಕಾರ. ಇದು  ೩೦೦೦ ಅಥವಾ ೬೦೦೦ ಕ್ಯೂಸೆಕ್ ಸಮಸ್ಯೆಯಲ್ಲ. ಅದಕ್ಕಿಂತ ದೊಡ್ಡದು. ಮಹದಾಯಿ ಸಮಸ್ಯೆಯ ಮೂಲವೂ ಇದರಲ್ಲಿಯೇ ಅಡಗಿದೆ.

ಇಡೀ ಈ ಹಗರಣದಲ್ಲಿ (ಹಾಗೆ ಕರೆಯಬಹುದೇನೋ?) ಭಾರತದ ಕೇಂದ್ರೀಕೃತ ಆಡಳಿತ ವ್ಯವಸ್ಥೆ  ಸಂವಿಧಾನವನ್ನು ತನಗೆ ಬೇಕೆಂದಹಾಗೆ ದುರುಪಯೋಗ ಪಡಿಸಿಕೊಂಡಿದ್ದು ಮತ್ತು ಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಹೊರಹೊಮ್ಮುತ್ತಿದೆ. ಇದೇ ಕೇಂದ್ರೀಕೃತ ವ್ಯವಸ್ಥೆ ಬಲಿಷ್ಠ ರಾಜ್ಯಗಳ ಮುಂದೆ ಬಾಗುತ್ತಿರುವುದೂ ಒಂದು ವಿಪರ್ಯಾಸ. ಇದೂ ಪಕ್ಷಾತೀತ .  ಒಕ್ಕೂಟ ವ್ಯವಸ್ಥೆಯ ಅರ್ಥ ಹಿಂದಿಯಲ್ಲಿ ಹೇಳುವಂತೆ "ಜಿಸ್ಕಿ ಲಾಠೀ  ಉಸ್ಕಿ ಭೈನ್ಸ್ "  ಹಾಗಾಗಿದೆ. ಇದಕ್ಕೆ ಕರ್ನಾಟಕವೂ ಮಾರ್ಪಾಡಾಗಬೇಕು.

ಇಲ್ಲಿ ಬಲಿಷ್ಠ ರಾಜ್ಯವೆಂದರೆ  ಆರ್ಥಿಕವಾಗಿ ಅಥವಾ ಭೌಗೋಳಿಕವಾಗಿ ಅಥವಾ ಜನಸಂಖ್ಯೆ ಆಧಾರದಮೇಲಾಗಲಿ ಅಲ್ಲ. ಅದು ರಾಜಕೀಯ ಶಕ್ತಿಯಾಗಿ. ರಾಜ್ಯವು ರಾಷ್ಟ್ರ ರಾಜಕಾರಣದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಒಂದು ದಿಟ್ಟ ಮತ್ತೂ ದಿಟ ಶಕ್ತಿಯಾಗಿ ಹೊಮ್ಮಬೇಕು. ಸಂವಿಧಾನದ ಸಂಸ್ಥೆಗಳು ರಾಜ್ಯಗಳ ಸಮಾನತೆಯನ್ನು ತಾವಾಗಿಯೇ ಕಾಪಾಡುವುದಿಲ್ಲ. ಅದನ್ನು ರಾಜ್ಯದ ರಾಜಕೀಯ ಶಕ್ತಿಗಳು ತಾವಾಗಿಯೇ ರಕ್ಷಿಸಬೇಕು. ಇದರಲ್ಲಿ ರಾಜಕಾರಣಿಗಳ ಹಿತವೂ ಅಡಗಿದೆ.

ರಾಜ್ಯ ವಿಧಾನಸಭೆಯ ವಿಸರ್ಜನೆಯ ದಿನಗಣನೆ ಇನ್ನೇನು ಆರಂಭವಾಗಿದೆ .  ನ್ಯಾಯಾಲಯ ತಡೆದಿಟ್ಟ ನಿರ್ಯಾಣಯವನ್ನು ಘೋಷಿಸಬಹುದು ಹಾಗೂ ಚುನಾಯಿತ ವಿಧಾನಸಭೆಯನ್ನು ವಿಸರ್ಜಿಸಲು ಕರೆಕೊಡಬಹುದು ಅಥವಾ ರಾಜ್ಯ ಸರಕಾರವೇ ಈ ನಿರ್ಣಯ ತೆಗೆದುಕೊಳ್ಳಬಹುದು. ಇನ್ನು, ನಮ್ಮ ಲೋಕಸಭಾ ಸದಸ್ಯರು ರಾಜೀನಾಮೆ ಕೊಡುತ್ತಾರಾ ಅಥವಾ ಪಕ್ಷದ ಹಿತದತ್ತ ಗಮನ ಕೊಡುತ್ತಾರಾ  ಎಂಬುದು ಬಾಕಿ ಉಳಿದಿರುವ ಕತೆ. ಏನಾದರೂ ಇದು ಕರ್ನಾಟಕ ರಾಜ್ಯ ರಾಜಕೀಯದ ಸಂಕ್ರಮಣ ಕಾಲ. ಇಂತಹ ಸಮಯದಲ್ಲಿ ಕೆಲವು ಸ್ಪಷ್ಟ, ದೂರದೃಷ್ಟಿಯ, ರಾಜ್ಯದ ಹಿತಾಸಕ್ತಿಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತೀ ಮುಖ್ಯ.  ರಾಜಕೀಯ ಧ್ರುವೀಕರಣ ಅನಿವಾರ್ಯ, ರಾಜ್ಯದ ಉಳಿವಿಗಾಗಿ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಉಂಟಾದರೆ ಮಾತ್ರ ರಾಜ್ಯದ ಅಸ್ತಿತ್ವ ಸಾಧ್ಯ.  ೧೯೯೧ರ ಕಾವೇರಿ ಸಂಘರ್ಷದ ಸಮಯದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ವ್ಯಕ್ತಪಡಿಸಿದ ಅಭಿಪ್ರಾಯವೇ ಇದು. ಇದನ್ನು ಎಲ್ಲ ರಾಜಕೀಯ ಪಕ್ಷಗಳು ಅರಿಯಬೇಕು. ನನ್ನ ಸಲಹೆಗಳು ಕೆಳಗಿನಂತಿವೆ:

೧. ಎಲ್ಲ ರಾಷ್ಟ್ರೀಯ ಪಕ್ಷಗಳ ಬಹಿಷ್ಕಾರ. ಸದ್ಯಕ್ಕೆ ಎರಡೂ ಪ್ರಬಲ ಪಕ್ಷಗಳು ಕೇಂದ್ರೀಯ ಸಂಘಟನೆಯ "franchisee" ಗಳಂತೆ ವರ್ತಿಸುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳ ಪರವಾಗಿ ಯಾರೂ ನಾಮಪತ್ರ ಸಲ್ಲಿಸಬಾರದೆಂಬಂತೆ ಒತ್ತಾಯ ಹೇರುವುದು. ರಾಜ್ಯದ ವಿವಿಧ ಸಂಘಟನೆಗಳ ಒಂದು ಸಮಾವೇಶ ಕರೆದು ಈ ಘೋಷಣೆಯಾಗಬೇಕು. ಭೀಮ, ಕೃಷ್ಣಾ, ಮಹದಾಯಿ, ತುಂಗಭದ್ರಾ ಹಾಗೂ ಕಾವೇರಿ ನದೀ ಪಾತ್ರದ ರೈತರು, ಸಾಹಿತಿ-ಬರಹಗಾರರು, ಕನ್ನಡಪರ ಹೋರಾಟಗಾರರು, ಕನ್ನಡ-ಸುದ್ದಿವಾಹಿನಿಗಳು, ಬುದ್ದಿ ಜೀವಿಗಳು, IT ಕೆಲಸಗಾರರು, ಸಿನೆಕಲಾವಿದರು ಇದರಲ್ಲಿ ಪಾಲ್ಗೊಂಡು, ಪಕ್ಷಾತೀತವಾಗಿ ರಾಷ್ಟ್ರೀಯ ಪಕ್ಷಗಳ ಬಹಿಷ್ಕಾರಕ್ಕೆ ಕರೆಕೊಡಬೇಕು.

೨. ಯಾರಾದರೂ ಈ ರಾಷ್ಟ್ರೀಯ ಪಕ್ಷದ ಟಿಕೆಟ್ ತೆಗೆದುಕೊಂಡರೆ, ಅವರ ಮನೆಯಮುಂದೆ, ಸಿನೆ ಕಲಾವಿದರಾದಿಯಾಗಿ, ಪ್ರತಿಭಟನಾ ಚಳುವಳಿ -- ಎಲ್ಲಾ ಶಾಂತಿಯುತವಾಗಿ.
೩. ರಾಜ್ಯದಲ್ಲಿ ರಾಷ್ಟ್ರದ ಮಾದರಿಯಲ್ಲಿ ಪಕ್ಷಗಳ ಉಗಮ.
         ಅ . ಈಗಿನ ಭಾರತೀಯ ಕಾಂಗ್ರೆಸ್ ಪಕ್ಷ (INC -- Cong(I) )  , ಕರ್ನಾಟಕ ಕಾಂಗ್ರೆಸ್ ಪಕ್ಷವಾಗಿ ಉದಯ. ಸಿದ್ದರಾಮಯ್ಯ ಅಥವಾ ಪರಮೇಶ್ವರಪ್ಪ ಇದರ ಅಧ್ಯಕ್ಷ . ಕರ್ನಾಟಕ ಕಾಂಗ್ರೆಸ್ , ಕೇಂದ್ರದ UPAದ  ಒಂದು ಅಂಗವಾಗಿ ವ್ಯವಹರಿಸಬಹುದು. ಚುನಾವಣೆಗೆ  Cong (I) ಇಂದ ಹಣ ಪಡೆಯ ಬಹುದು , ಆದರೆ ಕರ್ನಾಟಕದಿಂದ ಹಣ ಮಾತ್ರ ಹೋಗುವುದಿಲ್ಲ.
         ಆ . ಅದೇ ರೀತಿ BJP ರಾಜ್ಯ ಘಟಕವು ಕೆಜೆಪಿಯಾಗಿ ಪರಿವರ್ತನೆ. ಯೆಡಿಯೂರಪ್ಪ ಅಥವಾ ಶೆಟ್ಟರ ಇದರ ಅಧ್ಯಕ್ಷರಾಗಲಿ. ಅದೂ ಯಾವುದೇ ಸಮಸ್ಯೆಗೆ ಕೇಂದ್ರದತ್ತ ನೋಡುವಿದಲ್ಲ. ಕೆಜೆಪಿ ಕೇಂದ್ರದಲ್ಲಿ NDAದ   ಘಟಕ ಪಕ್ಷವಾಗಿ ಮುಂದುವರಿಯ ಬಹುದು.

         ಇ. ಈಗಿನ JD (S), ಇಂದಿನಂತೆಯೇ ರಾಜ್ಯದ ಪಕ್ಷವಾಗಿ ಮುಂದುವರಿಯಬಹುದು.

ಕರ್ನಾಟಕ ಕಾಂಗ್ರೆಸ್ನಲ್ಲಿ ಹಾಗೂ ಕೆಜೆಪಿಯಲ್ಲಿ ಕೆಲವು ಹೋಳಾಗಿ ಸಣ್ಣ ಪಕ್ಷಗಳಾಗಲೂ ಬಹುದು. ಆದರೆ ಅವೆಲ್ಲಾ ಪ್ರಾದೇಶಿಕ ಪಕ್ಷವಾಗೇ ಹೊಮ್ಮಿದರೆ ಸರಿ. ಬ್ರಿಗೇಡ್ಗಳು, ಅಹಿಂದ್ಗಳು ಜನ್ಮ ತಾಳಬಹುದು. ಇನ್ನು ರಾಜ್ಯದಲ್ಲೇ ಪ್ರಾಂತಾವರು ಚಿಕ್ಕ ಪಕ್ಷಗಳು ಉದಯವಾಗಲೂ ಬಹುದು. ಉದಾಹರಣೆಗೆ ಹೈದರಾಬಾದ್ ಕರ್ನಾಟಕ ಕಾಂಗ್ರೆಸ್, ಇತ್ಯಾದಿ. ಈಗಿನ ರಾಷ್ಟ್ರೀಯ ಪಕ್ಷದ ಭರಾಟೆಯಲ್ಲಿ ಪ್ರಾಂತೀಯ ಆಕಾಂಕ್ಷೆಗಳು ಹತ್ತಿಕ್ಕಲ್ಪಿಟ್ಟು , ಅವರ ಆಶೋತ್ತರಗಳಿಗೆ ವೇದಿಕೆಯೇ ಇಲ್ಲದೇ ಉಸಿರು ಕಟ್ಟಿಹೋಗಿದೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದಲ್ಲಿ ಅಂತಹ ಪ್ರಾಂತೀಯ ಜನರ ಆಸೆಗಳಿಗೂ ಒಂದು ಆಸರೆ ಸಿಕ್ಕ ಹಾಗಾಗುತ್ತದೆ.

ಇಂದಿನ ಬಿಜೆಪಿ ಪಕ್ಷದ ಸ್ಥಿತಿ ನೋಡಿದರೆ , ೧೭ ಲೋಕಸಭಾ ಸದಸ್ಯರೊಂದಿಗೆ ಕೇವಲ ೩ ಜನ ಕೇಂದ್ರದಲ್ಲಿ ಮಂತ್ರಿ ಪದವಿ ಪಡದುಕೊಂಡಿದ್ದಾರೆ. ಅದೇ ಕೆಜೆಪಿ ಪಕ್ಷವಾಗಿ ಏನ್.ಡಿ.ಎ. ಅಂಗವಾದರೆ, ಹೆಚ್ಚು ಹಾಗೂ ಪ್ರಮುಖ ಮಂತ್ರಿ ಪದವಿಗಳಿಗೆ ಚೌಕಾಸಿ ಮಾಡಬಹುದು, ಬ್ಲಾಕ್ಮೇಲ್ ಮಾಡಬಹುದು. ಇದು ನಮ್ಮ ರಾಜಕಾರಣಿಗಳಿಗೆ ಸಿಗುವ ಲಾಭ. ತಮಿಳನಾಡಿನ ಡಿ.ಎಂ.ಕೆ.  ಪಕ್ಷ ಯು.ಪ.ಎ. ಅವಧಿಯಲ್ಲಿ ಮಾಡಿದ್ದು ಅದೇ. 

ಸ್ವಲ್ಪ ವಿಷಯಾಂತರ. ಇತ್ತೀಚಿಗೆ ತಾರಾ ಕೃಷ್ಣಸ್ವಾಮಿಯವರು "ನ್ಯೂಸ್ ಮಿನಿಟ್ ವೆಬ್ ನ್ಯೂಸ್ paper ದಲ್ಲಿ ಬರೆದ "United States of South India ....." ಅಂಕಣವನ್ನು ಉಲ್ಲೇಖಿಸಲು ಇಚ್ಛಿಸುತ್ತೇನೆ(http://www.thenewsminute.com/article/united-states-south-india-can-southern-collective-get-us-better-deal-delhi-46501) . ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಕೇಂದ್ರಕ್ಕೆ ಕೊಡುವ ಸುಂಕ, ಕೇಂದ್ರದ ಒಟ್ಟು ಸುಂಕ ಶೇಖರಣೆಯ ಶೇ. ೩೦. ಇದರಲ್ಲಿ ದಕ್ಷಿಣಭಾರತದ ರಾಜ್ಯಗಳಿಗೆ ಅನುದಾನವಾಗಿ ಬರುವುದು ಶೇ.೧೮ ಮಾತ್ರ. ಇನ್ನು ಕರ್ನಾಟಕದ ಪಾಲುನೋಡಿದರೆ, ಪ್ರತಿ ಒಂದು ರೂಪಾಯಿ ಕೇಂದ್ರಕ್ಕೆ ಕೊಟ್ಟರೆ, ವಾಪಸ್ ಬರುವುದು ೪೭ ಪೈಸೆ ಮಾತ್ರ. ಬಿಹಾರದ ಮಟ್ಟಿಗೆ ಇದು ೯೬ ಪೈಸೆಯಾದರೆ, ಉತ್ತರ ಪ್ರದೇಶಕ್ಕೆ ಇದು ೧ರೂ ೭೯ಪೈಸೆ!!! ಭಾರತದ ರಕ್ಷಣಾ ವ್ಯವಸ್ಥೆ, ಭಾರತ ಸರ್ಕಾರದ ಖರ್ಚಿನ ಜೊತೆಗೆ ನಾವು ಉತ್ತರ ಪ್ರದೇಶ ಸರ್ಕಾರವನ್ನೂ ಪಾಲಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ದೌರ್ಬಲ್ಯವನ್ನು ತೋರಿಸುತ್ತದೆ. ಇಷ್ಟು ತೆರಿಗೆ ಕೊಟ್ಟರೂ ಬೆಂಗಳೂರು-ಮೈಸೂರು ಅಥವಾ ಬೆಂಗಳೂರು-ಹುಬ್ಬಳ್ಳಿ ರೈಲು ಹಳಿಗೆ ಕೇಂದ್ರದ ರೈಲು ಮಂತ್ರಿಯ ಮುಂದೆ ಭಿಕ್ಷೆ ಬೇಡುವುದು ಒಂದು ವಿಪರ್ಯಾಸ.

ಒಕ್ಕೂಟ ವ್ಯವಸ್ಥೆಯಲ್ಲಿದ್ದು, ನಮಗೆ ಬೇಕಾಗಿದ್ದನ್ನು ಪಡೆಯಬೇಕಾದರ ಒಂದೇ ಮಾರ್ಗವೆಂದರೆ ಪ್ರಾದೇಶಿಕ ಪಕ್ಷಗಳ ನಿರ್ಮಾಣ ಹಾಗೂ ಅವುಗಳ ಪೋಷಣೆ. ಅದರಂತೆ, ರಾಷ್ಟ್ರೀಯ ಪಕ್ಷಗಳ ಸಂಪೂರ್ಣ ಬಹಿಷ್ಕಾರ. ನಮ್ಮ ರೈತ ಮುಖಂಡರು, ಬುದ್ಧಿಜೀವಿಗಳು, ಕನ್ನಡ ಹೋರಾಟಗಾರರು ಮತ್ತು ಕಲಾವಿದರು ಕೈಗೂಡಿಸಿ ಪಕ್ಷಾತೀತವಾದ ಒತ್ತಾಯ ಮಾಡುತ್ತಾರೆಯೇ?

ಕೊನೆಯ ಪ್ರಶ್ನೆ --- "who  bells the cat and how quickly ?"

ಶ್ರೀಪಾದ್ ಅಣ್ಣಿಗೇರಿ
ಬೆಂಗಳೂರು
೧ ಅಕ್ಟೋಬರ ೨೦೧೬